Wednesday 6 April 2011

ಕಾಯುತಿರುವೆ ನಿನ್ನ ನೆನಪಲಿ..

ನೆನಪು
ದಿನ ನೆನೆಪಾಯಿತು ಅದಕ್ಕೆ ಎರಡು ನಿಮಿಷ ಮಿಸಲಿರುಸುತ್ತಿದ್ದೇನೆ..ಎಲ್ಲರ ಬದುಕಿನಲ್ಲಿ ಬಂದುಹೊಗಿರುವ ಕ್ಷಣಗಳಿರಬಹುದು . ದಿನ ನೆನಪಾಗಿದೆ.
ನಡೆಯಬೇಕಾದ ದಾರಿಯಿನ್ನೂ ಬಹುದೂರ, ಗುರಿ ಅಸ್ಪಷ್ಟವಾಗಿ ಕೂಡ ಕಾಣದಿರುವಷ್ಟು. ಮಾತಾಡಬೇಕಾಗಿರುವುದು ಬಹಳಷ್ಟು, ಮೌನದಲಿ ಇಷ್ಟು ದಿನ ಕಳೆದೆವು ಅನ್ನಿಸುವಷ್ಟು. ಮೌನದಲಿ ಮಾತಾಡುವವ ನೀನು ಅಲ್ಲಿರುವಾಗ, ನೀನಿಲ್ಲದ ದಾರಿಯಲಿ ಮೌನವಾಗಿ, ಒಂಟಿಯಾಗಿ ಹೇಗೆ ನಡೆಯಲಿ?
ಪ್ರೀತಿ ಅಂದ್ರೆ ಹೀಗಿರುತ್ತಾ? ಮೌನದಲ್ಲೇ ಹರಟುತಿದ್ದೇವೆ ಅನ್ನಿಸುವ ಹಾಗೆ, ಹೃದಯ ತುಂಬುವಷ್ಟು ಖುಷಿಯಾಗುವ ಹಾಗೆ, ಎದೆ ಬಡಿತ ನಿನ್ನ ಹೆಸರನ್ನೇ ಕರೆಯುವ ಹಾಗೆ.
ನೀನೆಷ್ಟು ನೆನಪಾಗ್ತಿಯ ಅಂತ ಕಣ್ಣ ರೆಪ್ಪೆಗಳನ್ನು ಕೇಳು. ಕಣ್ಣೀರಲ್ಲಿ ತೇವಗೊಂಡ ಅವಕ್ಕೆ ಗೊತ್ತು. ಬಾನ ಚುಕ್ಕಿಗಳನ್ನು ಕೇಳು, ನಿನ್ನ ನೆನಪಿನಲ್ಲಿ ಅವುಗಳನ್ನೇ ದಿಟ್ಟಿಸಿ ಮೈಮರೆತಿರೋದು ಅವಕ್ಕೆ ಗೊತ್ತು. ನೀ ಕೊಟ್ಟ ಗುಲಾಬಿಯನು ಕೇಳು, ನೆನಪಿನ ಹನಿಯಲಿ ಚಿಗುರುವ ಹಂಬಲವಿರುವ ಅವಕ್ಕೆ ಗೊತ್ತು. ಭಾವನೆಗಳನ್ನು ಕೇಳು, ನೀನಿಲ್ಲದೆ ಚಡಪಡಿಸುತ್ತಿರುವ ಅವಕ್ಕೆ ಗೊತ್ತು. ಬಾ.. ಭಾವನೆಗಳಿಗೆ ಬಣ್ಣ ಕೊಡು. ಮುಡಿಗೆ ಪ್ರೀತಿ ಗುಲಾಬಿ ಮುಡಿಸು. ಚುಕ್ಕಿಗಳಿಗೆ ಕೂಗಿ ಹೇಳು, ಮನದ ಚಂದಿರ ಬಂದಿರುವನೆಂದು. ಕಣ್ಣ ರೆಪ್ಪೆಗಳಿಗೆ ಹೇಳಬೇಕೆಂದಿಲ್ಲ, ನಿನ್ನ ನೋಡಲು ಪರಿತಪಿಸುವ ಅವುಗಳು ನಿನ್ನ ನೋಡಿದೊಡನೆ ಶಾಂತವಾಗುವವು. ತಣ್ಣನೆ ಗಾಳಿ ಬೀಸುವುದು ನಾವು ಅಪ್ಪಿಕೊಳಲೆಂದು. ಕೆನ್ನೆ ಕೇಳುವುದು ಮುತ್ತನೀಯಲೆಂದು. ಹೃದಯ ನಗುವುದು ಪುಳಕವಾಯಿತೆಂದು. ದಿನ ಲೆಕ್ಕಿಸುವಷ್ಟು ಕಾಯಿಸಬೇಡ. ನೀ ಬೆಸೆಯಬೇಕಾದ ಕೈಗಳಲಿ ಹೂದಳಗಳನಿತ್ತು ಕಾಯುತಿರುವೆ, ನೀ ಬರುವ ಹಾದಿಗೆ ಮುಡಿಸಲೆಂದು..
ಇರುಳಿಗೆ ಚಂದಿರನ ಬೆಳದಿಂಗಳ ಸಿಂಚನ. ನಿನ್ನ ಪ್ರೀತಿ ಹನಿ ನನ್ನ ಕೆನ್ನೆ ಚುಂಬಿಸಿದಂತೆನಿಸಿತು. ನಿನ್ನ ಪ್ರೀತಿ ವೈಖರಿಗೆ ಏನೆಂದು ಹೇಳಲಿ? ನೀನೆ ಚೆಲ್ಲಿದ ಬೆಳದಿಂಗಳಲಿ, ನಿನ್ನ ಪ್ರೀತಿ ಸಾನಿಧ್ಯದಲಿ ಮೈ ಮರೆತಿರುವಾಗ ಒಮ್ಮೆಲೇ ಎಚ್ಚೆತ್ತೆ. ಇದ್ದಕ್ಕಿದ್ದಂತೆ ಇರುಳು ದಟ್ಟವಾದಂತೆನಿಸಿತು. ಆಕಾಶದೆಡೆಗೆ ಮುಖ ಮಾಡಿದೆ. ನನ್ನ ಚಂದಿರನನ್ನು ನಾ ನೋಡದಂತೆ ತಡೆದಿದೆ ಮೋಡ. ಮನಸು ಚಡಪಡಿಸಿತು. ಕಾದು ಕುಳಿತೆ. ಮೋಡ ಸರಿಯುತ್ತಿಲ್ಲ. ಪ್ರತಿ ಕ್ಷಣವೂ ಯುಗವಾದಂತೆನಿಸಿತು. ಇನ್ನು ತಡೆಯಲಾಗಲಿಲ್ಲ. ಕಣ್ಣ ಅಂಚಿನಿಂದ ಕಣ್ಣೀರು ತಡೆಯಿಲ್ಲದೆ ಸುರಿಯತೊಡಗಿತು. ಮೋಡಕ್ಕೆ ಸರಿಯಲು ಹೇಳೋಣವೆಂದುಕೊಂಡೆ. ಗಂಟಲು ಕಟ್ಟಿ ಮಾತೇ ಹೊರಡಲಿಲ್ಲ. ನೋವಿನಲಿ ಬಿಕ್ಕಳಿಸಿದೆ. ಕತ್ತಲು ಅಸಹನೀಯ. ಇನ್ನೆಷ್ಟು ದಿನ ಸಹಿಸಲಿ? ನನ್ನ ಚಂದಿರ ನನಗೆ ಬೇಕು. ಅವನನ್ನು ಕಣ್ಣತುಂಬ ನೋಡಬೇಕು. ಕವಿದ ಮೋಡವೇ, ಬೇಗ ಸರಿದು ಬಿಡು. ದಯವಿಟ್ಟು ಮಳೆಯಾಗಿಯಾದರು ಸುರಿ. ಅವನೊಡನೆ ತುಂಬ ಮಾತಾಡಬೇಕಿದೆ. ನನ್ನ ಪ್ರೀತಿಯನ್ನು ಪಿಸುಗುಡಬೇಕಿದೆ. ನೆನಪು ಎಷ್ಟು ಕಾಡಿತು ಎಂದು ಹೇಳಬೇಕಿದೆ. ಅವನ ಪ್ರೀತಿ ಮಳೆಯಲ್ಲಿ ನೆನೆಯಬೇಕಿದೆ. ಅವನನ್ನು ಪ್ರೀತಿಸಿ ಕಾಡಿಸಬೇಕಿದೆ.

ಹೃದಯಕ್ಕೆ ಬಾಗಿಲಿತ್ತು. ನೀನು ಬಾಗಿಲು ತಟ್ಟಿದ ನೆನಪಿಲ್ಲ. ನಾನು ಬಾಗಿಲು ತೆರೆದ ನೆನಪಿಲ್ಲ. ಸಲೀಸಾಗಿ ಹೇಗೆ ಬಂದು ಕುಳಿತೆ? ನಿನ್ನ ಜೊತೆ ಇರುವ ಕಲೆಯನ್ನು ನಾ ಹೇಗೆ ಕಲಿತೆ? ಗೊತ್ತಿಲ್ಲ. ನಾವಿಬ್ಬರು ಜೊತೆಯಲ್ಲಿದ್ದರೆ ಪ್ರೇಮಪಕ್ಷಿಗಳಿಗೆ ಹೊಟ್ಟೆಕಿಚ್ಹಾಗಬಹುದು. ಹೃದಯದ ಬಾಗಿಲು ಮತ್ತೆ ಮುಚ್ಚಿದೆ. ಕೀಲಿಕೈ ಕಳೆದಿದೆ. ಜೀವನವಿಡೀ ನಿನ್ನ ಜೊತೆ ಕಳೆಯುವ ನಿನ್ನೆಲ್ಲ ನೋವನ್ನು ತೆಗೆದುಕೊಂಡು ನಿನ್ನ ಜೀವನದಲ್ಲಿ ನಗುವನ್ನು ತುಂಬುವ, ನಿನ್ನೆದೆಯಲ್ಲಿ ಆಶ್ರಯ ಪಡೆದು ನಿನ್ನ ಮಡಿಲಲ್ಲಿ ಪ್ರಾಣ ಬಿಡುವ ಆಸೆ ನನಗೆ.
ನಿನ್ನ …………

No comments:

Post a Comment